ಮಂತುಳ್ಳಿ -
	ಗಟಿಫೆರೀ ಕುಟುಂಬಕ್ಕೆ ಸೇರಿದ ಕಾಡುಮರ. ಅರದಳ, ಉಪಾಗಿ, ಮಂತೇಹುಳಿ ಪರ್ಯಾಯ ಸಾಮಗಳು. ಗಾರ್ಸೀನಿಯ ಕ್ಯಾಂಬೋಜಿಯ ವೈe್ಞÁನಿಕ ಹೆಸರು. ಭಾರತದ ಮೂಲ ನಿವಾಸಿ; ತಮಿಳುನಾಡಿನ ನೀಲಗಿರಿ, ಕೇರಳದ ತಿರುವಾಂಕೂರು, ಕರ್ನಾಟಕದ ಮಲೆನಾಡು ಪ್ರದೇಶಗಳಲ್ಲಿ ಹೇರಳವಾಗಿ ಬೆಳೆಯುತ್ತದೆ.

	ಇದು ಮಧ್ಯಮ ಗಾತ್ರದ ಮರ; 8-15 ಮೀ ಎತ್ತರಕ್ಕೆ ಬೆಳೆಯುವುದು. ಸದಾ ಹಸುರಾಗಿರುವ ಬಗೆಯದು. ಅಭಿಮುಖ ವೃಂತಪರ್ಣರಹಿತ ಎಲೆಗಳನ್ನು ಪಡೆದಿದೆ. ಸೇಬಿನ ಗಾತ್ರದ ಫಲಗಳನ್ನು ಬಿಡುತ್ತದೆ. ಫಲಗಳು ಮಾಗಿದ ಮೇಲೆ ಹಳದಿ ಇಲ್ಲವೆ ಕೆಂಪು ಬಣ್ಣತಾಳುತ್ತವೆ.

	ಮಂತುಳ್ಳಿಯ ಅಭಿವೃದ್ಧಿ ಬೀಜದ ಮೂಲಕ. ಈ ಮರದ ಚೌಬೀನೆಯನ್ನು ಪೆಟ್ಟಿಗೆ ತಯಾರಿಕೆಯಲ್ಲಿ ಉಪಯೋಗಿಸುವುದುಂಟು. ಮರದಿಂದ ಬರುವ ರೆಸಿನ್ನಿನಿಂದ ಹಳದಿ ಬಣ್ಣದ ಮೆರುಗೆಣ್ಣೆ ತಯಾರಿಸಲಾಗುತ್ತದೆ. ಹಣ್ಣಿನ ಸಿಪ್ಪೆಗೆ ಹುಳಿರುಚಿ ಇದೆ. ಇದನ್ನು ಹಾಗೆಯೇ ತಿನ್ನಬಹುದು. ಇಲ್ಲವೆ ಒಣಗಿಸಿ ಸಂಗ್ರಹಿಸಿಟ್ಟು ಬೇಕಾದಾಗ ಉಪಯೋಗಿಸಬಹುದು. ಹಣ್ಣಿನ ಸಿಪ್ಪೆಯ ಕಷಾಯ ಸಂಧಿವಾತಕ್ಕೆ ಮದ್ದು. ಪಶುಗಳ ಬಾಯಿ ಕಾಯಿಲೆಯಲ್ಲಿ ಹಣ್ಣಿನ ರಸವನ್ನು ಕೊಡುವುದುಂಟು. ಅಲ್ಲದೆ ಉದ್ಯಾನವನಗಳಲ್ಲೂ ತೋಪುಗಳಲ್ಲೂ ನೆರಳಿಗಾಗಿ ಮಂತುಳ್ಳಿಯನ್ನು ಬೆಳೆಸುವುದಿದೆ.
(ಎಸ್‍ಐ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ